ಪೂರ್ವಘಟ್ಟಗಳು -
ದಕ್ಷಿಣ ಭಾರತದ ತ್ರಿಕೋಣಾಕಾರದ ಸಮತಲ ಭೂಮಿಯ ಪೂರ್ವದ ಅಂಚಿನಲ್ಲಿ ಬಿಟ್ಟೂಬಿಡದಂತೆ ಹಬ್ಬಿರುವ ತಗ್ಗಿನ ಬೆಟ್ಟಗಳು. ಪೂರ್ವ ಘಟ್ಟಗಳು ಒರಿಸ್ಸ ರಾಜ್ಯದ ಬಾಲಸೂರ್‍ನಿಂದ ಪ್ರಾರಂಭವಾಗಿ ಆಂಧ್ರಪ್ರದೇಶದ ಮೂಲಕ ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯವರೆಗೆ ಸುಮಾರು 1,600 ಕಿ.ಮೀ. ದೂರ ಹಬ್ಬಿವೆ. ಗಂಜಾಮ್ ಮತ್ತು ವಿಶಾಖಪಟ್ಟಣಗಳ ಬಳಿ ಇವು ಬಂಗಾಲ ಕೊಲ್ಲಿಗೆ ಬಹಳ ಸಮೀಪದಲ್ಲಿ ಸಾಗಿವೆ. ಆದರೆ ದಕ್ಷಿಣದಲ್ಲಿ ಇವು ಒಳನಾಡಿನ ಕಡೆ ಸರಿಯುತ್ತ ಹೋಗುತ್ತವೆ. ಅಲ್ಲಿ ಪೂರ್ವ ಚಾಚುಗಳಿಗೂ ಸಮುದ್ರ ತೀರಕ್ಕೂ ನಡುವೆ 160 ರಿಂದ 240 ಕಿ.ಮೀ. ವರೆಗಿನ ಅಂತರದ ತಗ್ಗು ಭೂಮಿ ಇದೆ. ಚಿಲ್ಕ ಸರೋವರದ ಬಳಿ ಘಟ್ಟಗಳ ಎತ್ತರ 366 ಮೀ.ನಿಂದ 914 ಮೀ. ವರೆಗೆ ; ತಮಿಳುನಾಡಿನ ಸೇಲಮ್ ಮತ್ತು ಕೊಯಮತ್ತೂರು ಭಾಗಗಳಲ್ಲಿ 914 ಮೀ. ಪೂರ್ವ ಘಟ್ಟಗಳು ಪóಶ್ಚಿಮ ಘಟ್ಟಗಳಂತೆ ಅವಿಚ್ಛಿನ್ನವಾಗಿ ಹಬ್ಬಿಲ್ಲದೆ ಸಣ್ಣ ಸಣ್ಣ ಗಿರಿಗುಚ್ಛಗಳಲ್ಲಿ ಅನೇಕ ತೆರಪುಗಳೊಂದಿಗೆ ಸಾಗಿವೆ.

	ಪೂರ್ವಘಟ್ಟಗಳು ಹಬ್ಬಿರುವ ವಿವಿಧ ಪ್ರದೇಶಗಳಿಗೆ ಸಂಬಂಧಿಸಿದಂತೆ ಘಟ್ಟ ಸಾಲುಗಳಲ್ಲಿ ಬಗೆಬಗೆಯ ಶಿಲಾ ಪದರಗಳಿವೆ. ಗಂಜಾಮ್, ವಿಶಾಖಪಟ್ಟಣ ಹಾಗೂ ಗೋದಾವರಿ ಭಾಗಗಳ ಬೆಟ್ಟಗಳು ತಗ್ಗಾಗಿವೆ. ಅಲ್ಲಿಯ ಸರಾಸರಿ ವಾರ್ಷಿಕ ಮಳೆ 1,0 0-2,032 ಮೀ. ಅಲ್ಲಲ್ಲಿ ತೇಗದ ಮರಗಳ ಅರಣ್ಯಗಳಿಗೆ ಈ ಬೆಟ್ಟಗಳು ಕೊಂಡ, ಸಾವರ, ಕೋಯಿ ಮೊದಲಾದ ಆದಿವಾಸಿಗಳ ನೆಲೆಗಳಾಗಿವೆ. ಈ ಭಾಗದ ಅತ್ಯಂತ ಎತ್ತರವಾದ ಬೆಟ್ಟ ಗಂಜಾಮ್ ಜಿಲ್ಲೆಯ ಮಹೇಂದ್ರಗಿರಿ (1524 ಮೀ). ಮತ್ತಷ್ಟು ದಕ್ಷಿಣಕ್ಕೆ ದೂರದಲ್ಲಿ ಕರ್ನೂಲ್ ಜಿಲ್ಲೆಯ ಕಡೆ ಪೂರ್ವ ಘಟ್ಟಗಳಲ್ಲಿ ಅನೇಕ ಬೆಟ್ಟಗಳು ಅಡ್ಡಅಡ್ಡವಾಗಿ ಹಬ್ಬಿವೆ. ಅವಕ್ಕೆ ನಲ್ಲಮಲೈ ಎಂಬ ಹೆಸರಿದೆ. ಅವುಗಳ ಎತ್ತರ ಸುಮಾರು 914 ಮೀ. ಅಲ್ಲಿ ವಾರ್ಷಿಕ ಮಳೆ 762-1,016 ಮಿ.ಮೀ. ಆ ಬೆಟ್ಟಗಳಲ್ಲಿ ಚೆಂಚು ಎಂಬ ಆದಿವಾಸಿಗಳಿದ್ದಾರೆ. ಮತ್ತಷ್ಟು ದಕ್ಷಿಣದಲ್ಲಿ ಕಡಪದ ಕಡೆಗೆ ಪೂರ್ವ ಘಟ್ಟಗಳಿಗೆ ಪಾಲ್‍ಕೊಂಡ ಮೊದಲಾದ ಸ್ಥಳೀಯ ಹೆಸರುಗಳಿವೆ. ಅಲ್ಲಿಯ ಅರಣ್ಯಗಳಲ್ಲಿ ಕೆಂಪು ಗಂಧದ ಮರಗಳಿವೆ. ಆಂಧ್ರ ಪ್ರದೇಶದ ವೆಂಕಟಗಿರಿ, ಚಂದ್ರಗಿರಿ, ತಿರುಪತಿ, ಪೆನುಕೊಂಡ ಮೊದಲಾದ ಬೆಟ್ಟಗಳು ಪೂರ್ವ ಘಟ್ಟಗಳಿಗೆ ಸೇರಿವೆ.

	ಪೂರ್ವ ಘಟ್ಟಗಳು ಆಂಧ್ರ ಪ್ರದೇಶದ ದಕ್ಷಿಣದಲ್ಲಿ ನೈಋತ್ಯಕ್ಕೆ ತಿರುಗಿ ತಮಿಳುನಾಡಿನ ಉತ್ತರ ಆರ್ಕಾಟು, ಸೇಲಮ್ ಮತ್ತು ಕೊಯಮತ್ತೂರು ಜಿಲ್ಲೆಗಳ ಕಡೆಗೆ ಹಬ್ಬಿವೆ. ಈ ಭಾಗದಲ್ಲೂ ಅವುಗಳ ಸಾಲು ಸ್ಪಷ್ಟವಾಗಿಲ್ಲ. ಬೆಟ್ಟಗಳು ವಿಭಜಿತವಾಗಿವೆ. ಕರ್ನಾಟಕ ಭಾಗದ ಬಿಳಿಗಿರಿರಂಗನ ಬೆಟ್ಟವು ಪೂರ್ವ ಘಟ್ಟಗಳ ಶ್ರೇಣಿಗೆ ಸೇರಿದ್ದು. ಬಿಳಿಗಿರಿರಂಗನ ಬೆಟ್ಟದ ದಕ್ಷಿಣಕ್ಕೆ ತಮಿಳುನಾಡಿನ ನೀಲಗಿರಿ ಭಾಗದಲ್ಲಿ ಪೂರ್ವಘಟ್ಟಗಳು ಈಶಾನ್ಯಾಭಿಮುಖವಾಗಿ ಕವಲೊಡೆದು ಬರುವ ಪಶ್ಚಿಮ ಘಟ್ಟಗಳನ್ನು ಪಾಲ್‍ಘಾಟ್ ತೆರಪಿನ ಉತ್ತರದಲ್ಲಿ ಸಂಧಿಸಿ ಅವುಗಳೊಂದಿಗೆ ಸೇರಿ ಹೋಗಿವೆ. 

ತಮಿಳುನಾಡಿನಲ್ಲಿ ಪೂರ್ವ ಘಟ್ಟಗಳ ಉತ್ತರ ಭಾಗಕ್ಕೆ ಪಾಲ್‍ಘಾಟ್, ದಕ್ಷಿಣ ಭಾಗಕ್ಕೆ ಪೈನ್ ಘಾಟ್ ಎಂಬ ಹೆಸರುಗಳಿದ್ದವು. ಈ ಭಾಗಗಳು 18 ನೆಯ ಶತಮಾನದ ಕರ್ನಾಟಕ ಯುದ್ಧಗಳಲ್ಲಿ ಪ್ರಸಿದ್ಧವಾಗಿವೆ. ಪೂರ್ವ ಘಟ್ಟಗಳಿಗೂ ಬಂಗಾಲ ಕೊಲ್ಲಿಗೂ ನಡುವೆ ಇರುವ, ಈಗಿನ ಆಂಧ್ರ ಹಾಗೂ ತಮಿಳುನಾಡಿನ ತೀರ ಪ್ರದೇಶಕ್ಕೆ ತೊಂಡಮಂಡಲಮ್ ಎಂಬ ಹೆಸರಿತ್ತು. ತಮಿಳುನಾಡಿನ ಕರಾವಳಿ ಪ್ರದೇಶವನ್ನು ಕೊರನಾಡು ಹಾಗೂ ಕೋರಮಂಡಲಮ್ ಎಂದೂ ಕರೆಯಲಾಗುತ್ತಿತ್ತು. ಪಶ್ಚಿಮ ಘಟ್ಟಗಳಂತಲ್ಲದೇ, ಪೂರ್ವ ಘಟ್ಟಗಳಲ್ಲಿ ಅನೇಕ ತೆರಪುಗಳಿದ್ದು ಅವು ಜನರ ಸಂಪರ್ಕಕ್ಕೆ ಅನುಕೂಲ ಉಂಟುಮಾಡಿವೆ. ಈ ಘಟ್ಟಗಳಿಗೂ ಬಂಗಾಲ ಕೊಲ್ಲಿಗೂ ನಡುವಣ ಬಯಲು ನಾಡಿನಲ್ಲಿ ಪೂರ್ವ ಚಾಲುಕ್ಯ, ಕಳಿಂಗ, ನೊಳಂಬ, ಗಂಗ, ಚೋಳ, ವಿಜಯನಗರ ಮೊದಲಾದ ಸಾಮ್ರಾಜ್ಯಗಳು ಸ್ಥಾಪಿತವಾಗಿದ್ದವು. ಪೂರ್ವ ಘಟ್ಟಗಳ ಭಾಗದ ಪ್ರಮುಖ ಸ್ಥಳಗಳು ಒರಿಸ್ಸಾದ ಪುರಿ ಮತ್ತು ಗಂಜಾಮ್; ಆಂಧ್ರ ಪ್ರದೇಶದ ಭದ್ರಾಚಲಮ್, ವಿಶಾಖಪಟ್ಟಣ, ರಾಜಮಹೇಂದ್ರಿ, ಎಲ್ಲೂರು, ದೇವರಕೊಂಡ, ವಿನುಕೊಂಡ, ಉದಯಗಿರಿ, ಕಡಪ, ನೆಲ್ಲೂರು, ವೆಂಕಟಗಿರಿ, ಪುಲಿಕಾಡು, ತಿರುಪತಿ ಮತ್ತು ಪೆನುಕೊಂಡ. ತಮಿಳುನಾಡಿನ ಕಾಂಚೀಪುರ, ವೆಲ್ಲೂರು, ಕೃಷ್ಣಗಿರಿ, ಜಾಲಾರ್‍ಪೇಟೆ, ತಿರುವಣ್ಣಾಮಲೈ, ಧರ್ಮಪುರಿ, ಏರ್ಕಾಡು, ಸೇಲಮ್, ಮೆಟ್ಟೂರು, ಈರೋಡ್ ಹಾಗೂ ಭವಾನಿ.

ಪೂರ್ವ ಘಟ್ಟಗಳಲ್ಲಿ ಹುಟ್ಟು ಹರಿಯುವ ನದಿಗಳು ಕಡಿಮೆ. ಮಳೆ ಹೆಚ್ಚಾಗಿರುವ ಉತ್ತರದಲ್ಲಿ ಋಷಿಕುಲ್ಯಾ ಹಾಗೂ ಲಾಂಗುಲ್ಯಾ ನದಿಗಳು ಮತ್ತು ಗೋದಾವರಿಯ ಕೆಲವು ಉಪನದಿಗಳು ಉಗಮಿಸಿ ಹರಿಯುತ್ತವೆ. ಆದರೆ ದಕ್ಷಿಣದಲ್ಲಿ ಪ್ರಮುಖ ನದಿಗಳು ಯಾವುವೂ ಈ ಘಟ್ಟಗಳಿಂದ ಹರಿಯುವುದಿಲ್ಲ. ಅರಬ್ಬಿ ಸಮುದ್ರದಂಚಿನ ಪಶ್ಚಿಮ ಘಟ್ಟಗಳಲ್ಲಿ ಹುಟ್ಟುವ ಗೋದಾವರಿ, ಕೃಷ್ಣಾ, ಕಾವೇರಿ ನದಿಗಳು ಪೂರ್ವಾಭಿಮುಖವಾಗಿ ಸಾಗಿ ಪೂರ್ವ ಘಟ್ಟಗಳ ಹಲವಾರು ತೆರಪುಗಳ ಮೂಲಕ ಹರಿದು ಬಂಗಾಲ ಕೊಲ್ಲಿಯನ್ನು ಸೇರುತ್ತವೆ.								(ವಿ.ಜಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ